ದುಂಪರಾಸ್ಮೆ -
ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಇದರ ಶಾಸ್ತ್ರೀಯ ನಾಮ ಆಲ್ಪಿನಿಯ.  ಭಾರತದಲ್ಲಿ ಸುಮಾರು 17 ಪ್ರಭೇದಗಳಿವೆ. ಅಮೆರಿಕ ಬಿಟ್ಟು ಉಳಿದ ಉಷ್ಣ ಪ್ರದೇಶದಲ್ಲೆಲ್ಲ ಈ ಸಸ್ಯ ವ್ಯಾಪಿಸಿದೆ.  ಭಾರತದಲ್ಲಿ ಹಿಮಾಲಯದ ಪೂರ್ವ ಮತ್ತು ನೈಋತ್ಯ ಭಾಗಗಳಲ್ಲಿ ಹರಡಿದೆ. ಚೀನದಲ್ಲಿ ಆ. ಅಫಿಶಿನೇರಮ್ ಎಂಬ ಪ್ರಭೇದದ ಶಿಫಾವೃಂತದಿಂದ ಔಷಧ ತಯಾರಿಸುತ್ತಾರೆ.  ದುಂಪರಾಸ್ಮೆಯ ಕೆಲವು ಪ್ರಭೇದಗಳನ್ನು ಅಲಂಕಾರಕ್ಕಾಗಿ ಬೆಳೆಸುವುದು ಉಂಟು.

ದುಂಪರಾಸ್ಮೆ ಸುಮಾರು 2 ಮೀ. ಎತ್ತರಕ್ಕೆ ಬೆಳೆಯುತ್ತದೆ.  ಇದರ ಕಾಂಡ ಭೂಗತ ಬಗೆಯದು.  ಕಾಂಡಕ್ಕೆ ಕಡು ಕಿತ್ತಳೆಗಂದು ಬಣ್ಣವೂ ಸುವಾಸನೆಯೂ  ಕಾರಮಿಶ್ರಿತ ಕಹಿ ರುಚಿಯೂ ಉಂಟು.  ಶಿಫಾವೃಂತದಲ್ಲಿ 0.04% ಸುಗಂಧ ತೈಲ ಉಂಟು.  ಈ ತೈಲ ಮೀಥೈಲ್ ಸಿನಮೇಟ್, ಸಿನಿಯಲ್ ಮತ್ತು ಕೊಂಚ ಕರ್ಪೂರದಿಂದ ಕೂಡಿದೆ.  ಎಲ್ಲೆಯಲ್ಲೂ ಸುಗಂಧ ತೈಲ ವುಂಟು.

ಭಾರತದಲ್ಲಿ ಶಿಫಾವೃಂತಗಳನ್ನು ಸಂಧಿವಾತ ಮತ್ತು ಶೀತ ಬಾಧೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಇದು ಉಸಿರಾಟದ ತೊಂದರೆಯನ್ನೂ ನಿವಾರಿಸುವುದು. ಇದರಲ್ಲಿ ವಾತಹಾರಕ ಮತ್ತು ಜಠರೋತ್ತೇಜಕ ಗುಣಗಳೂ ಉಂಟು. ಶಿಫಾವೃಂತವನ್ನು ಮಲಯದಲ್ಲಿ ಮಸಾಲೆ ಪದಾರ್ಥವಾಗಿ ಬಳಸುವುದಿದೆ. ಇದರ ಫಲಗಳನ್ನು ಏಲಕ್ಕಿಗೆ ಬದಲು ಉಪಯೋಗಿಸುವುದುಂಟು. ಆ. ಮಲಕ್ಕೆನ್ಸಿಸ್ ಪ್ರಭೇದದ ಶಿಫಾವೃಂತಗಳನ್ನು ಜಾವಾದಲ್ಲಿ ವೃಣದ ಉಪಶಮನಕ್ಕೆ ಬಳಸಲಾಗುವುದು. ಆ. ಸ್ಪೀಶಿಯೋಸ ಪ್ರಭೇದದ ಕಾಂಡದ ನಾರಿನಲ್ಲಿ ಸೆಲ್ಯುಲೋಸ್ ಅಧಿಕ ಮೊತ್ತದಲ್ಲಿರುವುದರಿಂದ ಇದು ಕಾಗದದ ತಯಾರಿಕೆಗೆ ಉಪಯುಕ್ತ.  
 											  (ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ